ಸಾಮಾನ್ಯ ಕಾಷ್ಟದೋಲು ಕಾಣುವ ಗಂಧದ ಕೋರಡೋಂದು
ತಾ ಸೂಸುವ ಪರಿಮಳವು ಅಮರವಾಗಿರುವಂತೆ
ಸಾಮಾನ್ಯ ಹೆಣ್ಣು ನೋಡಲು ನೀನಾದರೂ ಎನ್ನ ಅಕ್ಕಮ್ಮ
ನೀ ಸೂಸಿದ ಪ್ರೀತಿ ಮಾಡಿದಾ ಸೇವೆ ಅದು ಅಮರವಮ್ಮ
ತೀಡಿ ತೀಡಿ ತೇದರೂ ಲೆಕ್ಕಿಸದೇ ತನ್ನಂದವ ಗಂಧದ ತುಂಡು
ಮೊಲ ಸ್ವಭಾವವ ಬಿಡದೆ ಹೆಚ್ಚು ಸುಗಂಧವ ಪಸರಿಸುವಂದದಿ
ದುಡಿಸಿ ದುಡಿಸಿ ಸವೆಸಿದರೂ ಲೆಕ್ಕಿಸದೇ ನಿನ್ನ ಚಂದವ
ಪಸರಿಸಿದೆ ಆದರೂ ದಿಗಂತಕೆ ಪ್ರೀತಿಯ ಸುಗಂಧವ
ಕೊಡಲಿ ಉಳಿಗಳ ಪೆಟ್ಟ ಸಹಿಸುತ ತಾ ತಾಳ್ಮೆಯಲಿ
ಚಂದನದ ಬೊಂಬೆಗಳ ರೂಪದಲಿ ಗಂಧವು ಹೊರಬರುವಂದದಲಿ
ಮೊನಚು ಮಾತುಗಳ ಹೊಡೆತ ಕೊಂಕೊ ನುಡಿಗಳ ಪೆಟ್ಟು ಸಹಿಸುತ ಸಹನೆಯಲಿ
ನೊಂದು ಬೆಂದು ಮುಳುಗಿದರೂ ನಗುನಗುತ ಮೇಲೆದ್ದೆ ನೀ ನಿಜ ಸತಿಯ ರೂಪದಲಿ
ಹದಿನೈದು ವರ್ಷಗಳು ಹಾಸಿಗೆಯಲಿ ನರಳಿ ಹೊರಳಾಡಿದೆ
ಆಗಿ ನೀ ರೋಗಗಳ ಆಕ್ರಮಣಕ್ಕೆ ಬಲಿ
ಆದರೂ ಮುನ್ನಡೆದೆ ನೀ ಬಿಡದೆ ವ್ರತ ಪೂಜೆಗಳ ಕಾರ್ಯದಲಿ
ಕಷ್ಟ ನಷ್ಟಗಳ ತೋರ್ಗೊಡದೆ ನಿನ್ನ ನಗು ಮುಖದಲಿ
ನಿನ್ನ ತಾಳ್ಮೆಯ ವಾರಿಧಿಯಲಿ ಮುಳುಗಿದವು ನೋವು ನಲಿವುಗಳು
ಎಲ್ಲರನು ನೆನೆಸಿದವು ನಿನ್ನ ಹೃದಯ ಕಾರಂಜಿಯ ಪ್ರೀತಿ ತುಂತುರುಗಳು
ಎಪ್ಪತ್ತಾರು ವರ್ಷಗಳ ನಿನ್ನ ಈ ಬದುಕಿನಾ ಹಾದಿ
ಮಾಡಿದವು ನಿನ್ನ ಸಂಕಲ್ಪಗಳ ಛಲದ ಬುನಾದಿ
ಸದಾಚರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಎಂದು ಸಾರುತಿಹುದು ಒಂದು ನಾಣ್ನುಡಿಯು
ಈ ಜಾಣ್ನುಡಿಯು ನಿನಗಾಗಿಯೇ ಹೇಳಿದಂತಿದೆ
ಎಮಗೆ ಸ್ಫೂರ್ತಿಯಾಗಿದೆ ನಿನ್ನ ಜೀವನ ಗಾಥೆಯು
ನಾ ತಮ್ಮನಾದರೂ ನೀ ನನ್ನ ಕಾಣುತ್ತಿದ್ದೆ ಗುರುವಿನಾ ಭಾವದಲಿ (ಅದಕಾಗಿ)
ಹೃದಯಾಂತರದಿಂ ಅರ್ಪಿಸುವೆ ನಮನವನು ಮನದಲಿ.